Bhajane_Book_thumb


ಶ್ರೀ ಸ.ಸ. ರಂಗರಾವ ಮಹಾರಾಜರು


ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ದೇವರ ಹಿಪ್ಪರಗಿ ಮಲ್ಲಯ್ಯನ ಆರಾಧಕರು, ಶುಕ್ಲಯಜುರ್ವೇದೀಯ, ಕಾಣ್ವಶಾಖಾ, ಕೌಂಡಿಣ್ಯಗೋತ್ರದ ಶ್ರೀ ಗುಂಡೆರಾವ ಕುಲಕರ್ಣಿ ಹಾಗೂ ಸೌ.ಲಕ್ಷ್ಮೀತಾಯಿ ಎಂಬ ಸಾತ್ವಿಕ ದಂಪತಿಗಳ ಉದರದಿಂದ ಶಾರ್ವರೀನಾಮ ಸಂವತ್ಸರ ಮಾರ್ಗಶೀರ್ಷ ಮಾಸ, ಮೋಕ್ಷದಾ ಏಕಾದಶಿ ರವಿವಾರ ದಿನಾಂಕ 2-12-1900ರ ಗೀತಾ ಜಯಂತಿಯ ಶುಭದಿನದಂದು ಶ್ರೀ ಸ.ಸ. ರಂಗರಾವ ಮಹಾರಾಜರ ಜನನವಾಯಿತು.

ಬಾಲ್ಯದಲ್ಲಿ ಮಾತೃವಾತ್ಸಲ್ಯದಿಂದ ವಂಚಿತರಾದ ಶ್ರೀ ರಂಗರಾವ ಮಹಾರಾಜರನ್ನು ದಿನಾಂಕ 14-7-1911ರಂದು ಉಪನಯನದ ಕಾಲಕ್ಕೆ ಕಾಕಾ ಶ್ರೀ ಯಲಗುರ್ದರಾಯರಿಗೆ ದತ್ತಕ ನೀಡಲಾಯಿತು.

ಇನ್ನೊರ್ವ ಕಾಕಾ ಶ್ರೀ ಮಾರ್ತಂಡರಾಯರು ಇದ್ದ ರಾಮನಟ್ಟಿಯ ಹಣಮಂತ ದೇವರ ಗುಡಿಯಲ್ಲಿ ಹಾಗೂ ಸಾಲವಾಡಗಿಯಲ್ಲಿ ಅಭ್ಯಾಸ ಪೂರ್ತಿಗೊಳಿಸಿದರು. ಇಸ್ವಿ 1918ರಲ್ಲಿ ಉಮದಿ ಶ್ರೀ ಸ.ಸ. ಶ್ರೀ ಭಾವೂಸಾಹೇಬ ಮಹಾರಾಜರ ಹಿರಿಯ ಅನುಭಾವಿ ಶಿಷ್ಯರಾದ ಶ್ರೀ ಸ.ಸ. ರಾಮಚಂದ್ರರಾವ ಮಹಾರಾಜರು ಹೊರ್ತಿಯವರಿಂದ ನಾಮೋಪದೇಶ ಪಡೆಯುವದರೊಂದಿಗೆ ಅಧ್ಯಾತ್ಮ ಸಾಧನೆ ಪ್ರಾರಂಭಿಸಿದರು. ಸಂಸಾರ ಜೀವನದಲ್ಲಿ ಹುಟ್ಟಿದ ಒಂದೇ ಮಗು ತೀರಕೊಂಡಾಗ ಆಸರೇ ಖಲು ಸಂಸಾರೇ ಸುಖಭ್ರಾಂತಿ ಶರೀರಾಣಾಂ ಎನ್ನುತ್ತ 120 ಎಕರೆ ಜಮೀನು, ಏಳೂರು ಕುಲಕರ್ಣಿಕೆ ವತನ. ಸುಖ, ಸಂಪತ್ತುಗಳನ್ನು ತ್ಯಾಗಮಾಡಿ ಪ್ರಾಪಂಚಿಕ ವಿಷಯಗಳಿಂದ ವಿಮುಖರಾದರು. ಅಧ್ರುವೇ ಹಿ ಶರೀರೇ ಈ ಶರೀರ ಅಶಾಶ್ವತವಾದದ್ದು, ಯೋ ನ ಕರೋತಿ ತಪೋರ್ಜನಂ ಸ ಪಶ್ಚಾತ್ತಾಪ್ಯತೇ- ಯಾವನು ತಪಶ್ಚರ್ಯೆ ಗೈಯ್ಯುವುದಿಲ್ಲವೋ, ಅವರು ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುತ್ತಾ ರಾಮನಟ್ಟಿ, ಇಂಗಳೇಶ್ವರ, ರಬಿನಾಳದ ಗುಹೆಗಳಲ್ಲಿ 20 ವರ್ಷಕ್ಕೂ ಹೆಚ್ಚುಕಾಲ ಕಠೋರ ತಪಃ ಸಾಧನೆ ಗೈದರು. ವಂಶಾಭಿವೃದ್ಧಿಗಾಗಿ ಹಾಗೂ ಹೆಂಡತಿಯ ಸಹಾಯಕ್ಕೆಂದು ದತ್ತಕ ಮಗನನ್ನು ಹೊಂದಿ, ಗುರುವಿನ ಆದೇಶದಂತೆ ಹಠಯೋಗದಿಂದ ನಿವೃತ್ತಿ ಪಡೆದು ರಾಜಯೋಗ ಸಾಧನೆಗೈಯುತ್ತಾ, ಶ್ರೀ ಸಮರ್ಥರ ದಾಸಬೋಧ ಗ್ರಂಥ ಪಾರಾಯಣದಲ್ಲಿ ತೊಡಗಿ ಜನ ಸಮುದಾಯದ ಉದ್ಧರಕ್ಕಾಗಿ ಭಕ್ತಿ ಪ್ರಸಾರ ಕೈಗೊಂಡರು, ದಿನಾಂಕ 28-7-1937ರಂದು ಶ್ರೀ ಸ.ಸ. ರಾಮಚಂದ್ರರಾವ ಮಹಾರಾಜರ ನಿರ್ಯಾಣದ ನಂತರ ಸಂಪೂರ್ಣವಾಗಿ ಮನೆಯನ್ನು ತ್ಯಜಿಸಿ ಭಕ್ತಿಸಾಧನೆಗೈದರು. ತಡವಲ, ತೊರವಿಯಲ್ಲಿ ತಮ್ಮ ಗುರುಗಳ ಮಠವನ್ನು ಸ್ಥಾಪಿಸಲು ಅವಕಾಶಸಿಗದಿದ್ದಾಗ, ಪ್ರಯತ್ನವನ್ನು ಮುಂದುವರಿಸುತ್ತಾ 1942ನೇಯ ಇಸ್ವಿಯಲ್ಲಿ ಬಿಜಾಪುರದಿಂದ 30 ಕಿ.ಮೀ. ದೂರದ ಹಿಂದೊಮ್ಮೆ ಕುಕ್ಕಟಮುನಿ ಆಶ್ರಮವಾಗಿದ್ದ, ಈಗಿನ ಕೂಪಕಡ್ಡಿ ಗ್ರಾಮದಲ್ಲಿ ಗುರುವಿನ ಸಮಾಧಿ ಸ್ಥಾಪನೆಯೊಂದಿಗೆ ಭಕ್ತಸಂಪ್ರದಾಯದ ಕೇಂದ್ರ ಒಂದರ ಹರಿಕಾರರಾದರು. 105 ಸಾರಿ ಶ್ರೀ ಸಾರ್ಥ ದಾಸಬೋಧ ಗ್ರಂಥ ಪಾರಾಯಣದಿಂದ ಪ್ರಚೀತಿ ಉಂಟಾಗುತ್ತದೆ ಎನ್ನುತ್ತಿದ್ದ ಶ್ರೀ ರಂಗರಾವ ಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ಸಾವಿರಕ್ಕೂ ಮಿಗಿಲಾಗಿ ಶ್ರೀ ದಾಸಬೋಧ ಗ್ರಂಥ ಪಾರಾಯಣ ಮಂಗಲವನ್ನು ಆಚರಿಸಿದರು. ದಿಂಡಿಯೊಂದಿಗೆ 25 ವರ್ಷಗಳಿಗೂ ಹೆಚ್ಚಾಗಿ ಪಂಢರಪುರ ಕ್ಷೇತ್ರದ ವಾರಿಗೂ ಹೋಗಿರುವರಲ್ಲದೆ, ಶ್ರೀಶೈಲ, ಕಾಶಿ, ಗಾಣಗಾಪುರ, ಆಳಂದಿ, ರಾಮೇಶ್ವರ, ಸಜ್ಜನಗಡ ಕ್ಷೇತ್ರ ದರ್ಶನ ಕೈಗೊಂಡರು, ಸಪ್ತಾಹ, ಸತ್ಸಂಗಳ ನಿಮಿತ್ತವಾಗಿ ತೊರವಿ, ತಾಳಿಕೋಟಿ, ಬಿಜಾಪುರ, ಯಕ್ಕುಂಡಿ, ಜೈನಾಪುರ, ಕೋಟ್ಯಾಳ, ಢವಳಗಿ, ಹೀಗೆ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಜನಸಮುದಾಯವನ್ನು ಸನ್ಮಾರ್ಗದ ಕಡೆಗೆ ಪ್ರೇರೇಪಿಸಿದರು.

ಊರು, ಜಾತಿ, ಕುಲಗಳೆಂದು ತಾರತಮ್ಯ ಗೈಯದೆ ತಮ್ಮ ಸಂಪರ್ಕಕ್ಕೆಬಂದ ಸಾವಿರಾರು ಭಕ್ತರಿಗೆ ನಾಮೋಪದೇಶ ನೀಡಿ, ಈ ದೇಶದಸತ್ಪ್ರಜೆಗಳನ್ನಾಗಿ ಮಾಡಿದ್ದಾರೆ. ಈ ರೀತಿ 75 ವರ್ಷಗಳ ತ್ಯಾಗ, ಸಮರ್ಪಣಾ ಸಂಪನ್ನ ಜೀವನವನ್ನು ನಿರ್ವಹಿಸಿ, ಉದ್ವೇಗಾನಂದ ರಹಿತಃ ಸಮಯಾ ಸ್ವಚ್ಚಯಾ ಧಿಯಾ ಸ ಜೀವನ್ಮುಕ್ತ ಉಚ್ಯತೇ- ಸಮವಾದ ಸ್ವಚ್ಛವಾದ ಬುದ್ಧಿಯಿಂದ ಉದ್ವೇಗಾನಂದ ರಹಿತರಾಗಿ ಶ್ರೀ ರಂಗರಾವ ಮಹಾರಾಜರು ಆನಂದನಾಮ ಸಂವತ್ಸರ ಪೌಷ್ಯ ಶುದ್ಧ ನವಮಿ, ಮಂಗಳವಾರ ದಿನಾಂಕ 21-1-1975ರಂದು ಬಿಜಾಪುರದಲ್ಲಿ ಆತ್ಮೀಯ ಶಿಷ್ಯ ಶ್ರೀ ನಾನಾ ಸಾಹೇಬ ಕುಲಕರ್ಣಿ ಕೊಟ್ಯಾಳ ಅವರ ಮನೆಯಲ್ಲಿ ಬ್ರಹ್ಮೀಭೂತರಾದರು. ಮುಂದೆ ದಿನಾಂಕ 21-01-1977ರಂದು ಶ್ರೀ ರಂಗರಾವ ಮಹಾರಾಜರಿಗೆ ಪ್ರೀಯವಾದ ವಿಜಯದಶಮಿಯಂದು, ಅವರ ಗುರುಗಳ ದಿವ್ಯಸನ್ನಿಧಾನವಾದ ಕೂಪಕಡ್ಡಿಯಲ್ಲಿ ಸಕಲ ವೈಭವ, ಭಕ್ತಿಗಳಿಂದ ಶ್ರೀ ರಂಗರಾವ ಮಹಾರಾಜರ ಸಮಾಧಿಯನ್ನು ನಿರ್ಮಿಸಲಾಯಿತು. ಶ್ರೀ ರಂಗರಾವ ಮಹಾರಾಜರು ತೋರಿಸಿಕೊಟ್ಟ ಶ್ರೀಕ್ಷೇತ್ರ ಕೂಪಕಡ್ಡಿ ಸಾಧನಾ ಪದ್ಧತಿಯು ಅವ್ಯಾಹತವಾಗಿ ಮುಂದುವರಿದಿದೆ.

ಜನನ - ಕುದರಿಸಾಲವಾಡಗಿಸಮಾಧಿ - ಕೂಪಕಡ್ಡಿ
ಮಾರ್ಗಶೀರ್ಷ ಶುದ್ಧ,(ಮೋಕ್ಷದಾ) ಏಕಾದಶಿ ಪೌಷ್ಯ ಶುದ್ಧ, ನವಮಿ
ದಿನಾಂಕ 02-12-1900ದಿನಾಂಕ 21-01-1975